Kannada Duniya

ಬೇಗನೇ ರೆಡಿಯಾಗುತ್ತೆ ಈ ಚಿಕನ್ ಬಿರಿಯಾನಿ!

ಬಿರಿಯಾನಿ ತಿನ್ನಬೇಕು ಎಂಬ ಆಸೆ ಆಗುತ್ತಿದೆಯಾ….? ಆದರೆ ಮಾಡುವುದಕ್ಕೆ ತುಂಬಾ ಕೆಲಸವೆಂದು ಬೇಜಾರು ಮಾಡಿಕೊಳ್ಳುವವರಿಗೆ ಇಲ್ಲಿ ಸುಲಭವಾದ ವಿಧಾನವಿದೆ. ಬೇಗ ಆಗುವುದರ ಜೊತೆಗೆ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

ಚಿಕನ್  ½ ಕೆಜಿ, ಅಕ್ಕಿ-1 ಗ್ಲಾಸ್, ಎಣ್ಣೆ-3 ಟೇಬಲ್ ಸ್ಪೂನ್, ಏಲಕ್ಕಿ-3, ಲವಂಗ-4, ಪಲಾವ್ ಎಲೆ-2, ಚಕ್ಕೆ-2 ತುಂಡು, ಸೋಂಪು-1 ಟೀ ಸ್ಪೂನ್, ಈರುಳ್ಳಿ-3, ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಟೇಬಲ್ ಸ್ಪೂನ್, ಹಸಿಮೆಣಸು-5, ಕೊತ್ತಂಬರಿ ಸೊಪ್ಪು-1 ಹಿಡಿ, ಪುದೀನಾ ಸೊಪ್ಪು-1 ಹಿಡಿ, ಅರಿಶಿನ-1/4 ಟೀ ಸ್ಪೂನ್, ಟೊಮ್ಯಾಟೋ-2, ಗರಂ ಮಸಾಲೆ-1 ಟೀ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ

ಒಲೆಯ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ 3 ಟೇಬಲ್ ಸ್ಪೂನ್ ಎಣ್ಣೆ, 2 ಪಲಾವ್ ಎಲೆ, 3 ಏಲಕ್ಕಿ, 4, ಲವಂಗ, 2 ತುಂಡು ಚಕ್ಕೆ, 1 ಟೀ ಸ್ಪೂನ್ ಸೋಂಪು ಕಾಳು ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ 3 ದೊಡ್ಡ ಈರುಳ್ಳಿಯನ್ನು ಕತ್ತರಿಸಿ ಹಾಕಿ ತುಸು ಫ್ರೈ ಮಾಡಿಕೊಂಡು 1 ಟೇಬಲ್ ಸ್ಪೂನ್ ನಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹಾಗೇ 5 ಹಸಿಮೆಣಸನ್ನು ಉದ್ದಕ್ಕೆ ಸೀಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಕೊತ್ತಂಬರಿಸೊಪ್ಪು, ಪುದೀನಾ ಎರಡೂ ಒಂದು ಮುಷ್ಟಿ ತೆಗೆದುಕೊಂಡು ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಕುಕ್ಕರ್ ಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ¼ ಟೀ ಸ್ಪೂನ್ ಅರಿಶಿನ ಹಾಕಿ. ನಂತರ ಎರಡು ಟೊಮ್ಯಾಟೋವನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ನಂತರ ಟೊಮ್ಯಾಟೋ ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ. ಇದಾದ ಬಳಿಕ ಅದಕ್ಕೆ ಗರಂ ಮಸಾಲೆ 1 ಟೀ ಸ್ಪೂನ್ ಹಾಕಿ ಮಿಕ್ಸ್ ಮಾಡಿ ½ ಕೆಜಿ ಚಿಕನ್ ಅನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.2 ಗ್ಲಾಸ್ ನೀರು ಸೇರಿಸಿ ಚೆನ್ನಾಗಿ ಕುದಿಸಿಕೊಂಡು 1 ಗ್ಲಾಸ್ ಅಕ್ಕಿ ಹಾಕಿ. ಕುಕ್ಕರ್ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ರುಚಿಯಾದ ಚಿಕನ್ ಬಿರಿಯಾನಿ ಸವಿಯಲು ಸಿದ್ಧ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...