Kannada Duniya

ಚಪಾತಿಗೆ ಸಾಥ್ ನೀಡುವ ಬದನೆಕಾಯಿ ಗೊಜ್ಜು ಹೀಗೆ ಮಾಡಿ…!

ಬಿಸಿ ಬಿಸಿ ಅನ್ನ ಅಥವಾ ಚಪಾತಿ ಇರುವಾಗ ಏನಾದರೂ ಗೊಜ್ಜು ಇದ್ದರೆ ಚೆನ್ನಾಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ….? ಇನ್ಯಾಕೆ ತಡ ಸುಲಭವಾಗಿ ಸಿಗುವಂತಹ ಬದನೆಕಾಯಿಯನ್ನು ಬಳಸಿ ಮಾಡಬಹುದಾದ ರುಚಿಕರವಾದ ಗೊಜ್ಜು ಇಲ್ಲಿದೆ. ಇದು ಬಾಯಿಗೂ ರುಚಿ ನೀಡುತ್ತದೆ. ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು

2 ಹದ ಗಾತ್ರದ ಬದನೆಕಾಯಿ, ಟೊಮೆಟೊ-1, ಕರಿಬೇವು-3 ದಂಟು, ಜೀರಿಗೆ-1 ಟೀ ಸ್ಪೂನ್, ಈರುಳ್ಳಿ-1 ಹದ ಗಾತ್ರದ್ದು, ಎಣ್ಣೆ-1 ದೊಡ್ಡ ಚಮಚ, ಹಸಿಮೆಣಸು-5, ತೆಂಗಿನಕಾಯಿ ತುರಿ-3 ದೊಡ್ಡ ಚಮಚದಷ್ಟು, ಕೊತ್ತಂಬರಿಸೊಪ್ಪು- 2 ಟೇಬಲ್ ಸ್ಪೂನ್, ಬೆಳ್ಳುಳ್ಳಿ-8 ಎಸಳು.ಉಪ್ಪು ರುಚಿಗ ತಕ್ಕಷ್ಟು.

ಮಾಡುವ ವಿಧಾನ

ಮೊದಲಿಗೆ ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಅದನ್ನು ಕತ್ತರಿಸಿ ನೀರಿನಲ್ಲಿ ನೆನೆಯಲು ಬಿಡಿ.ಒಂದು ಮಿಕ್ಸಿ ಜಾರಿಗೆ ಹಸಿಮೆಣಸು, ತೆಂಗಿನಕಾಯಿ ತುರಿ, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ ಹಾಕಿ ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಿ. ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಜೀರಿಗೆ ಸೇರಿಸಿ. ಇದು ಸಿಡಿದ ಬಳಿಕ ಕರಿಬೇವು, ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ.ಇದಾದ ಬಳಿಕ ರುಬ್ಬಿಕೊಂಡ ಮಿಶ್ರಣ ಸೇರಿಸಿ ಹಸಿವಾಸನೆ ಹೋಗುವವರೆಗೆ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಬದನೆಕಾಯಿ ಹಾಕಿ ಉಪ್ಪು ಬೆರೆಸಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಟೊಮೆಟೋವನ್ನು ಚಿಕ್ಕದಾಗಿ ಕತ್ತರಿಸಿ ರುಬ್ಬಿಕೊಂಡಿಟ್ಟುಕೊಳ್ಳಿ. ಬೆಂದ ಬದನೆಕಾಯಿಗೆ ಇದನ್ನು ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಬಿಸಿ ಅನ್ನ ಹಾಗೂ ಚಪಾತಿ ಜೊತೆ ಸವಿಯಲು ಚೆನ್ನಾಗಿರುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...